ಕ್ಲೆಯಿರ  
ತಿಯೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಸದಾ ಹಸಿರಾಗಿರುವ ಪೊದೆಸಸ್ಯವಿದು. ಸುಮಾರು 4'-6' ಎತ್ತರಕ್ಕೆ ಬೆಳೆಯುತ್ತದೆ. ಚಲುವಾದ ಬಣ್ಣದ ಬಿಡಿಬಿಡಿಯಾದ ದಳಗಳುಳ್ಳ ಹೂಗಳು, ರೋಮಮಯ ಪರಾಗಕೋಶಗಳು, ಮಿಶ ಬಣ್ಣದ ಎಲೆಗಳು-ಇವುಗಳಿಂದಾಗಿ ಗಿಡ ಅಂದವಾಗಿ ಕಾಣುತ್ತದೆ. ಕ್ಲೆಯಿರದಲ್ಲಿ ಸುಮಾರು 9 ಪ್ರಭೇದಗಳಿವೆ. ಇವುಗಳಲ್ಲೆಲ್ಲ ಹೆಚ್ಚು ಪ್ರಸಿದ್ಧವಾದುದು ಜಪಾನಿಕ ಅಥವಾ ಆಕ್ನೇಸಿಯ ಪ್ರಭೇದ. ಉದ್ದನೆಯ ಭರ್ಜಿಯಾಕಾರದ ಎಲೆಗಳು, ನವುರಾದ ಸುವಾಸನೆಯಿರುವ ಹಳದಿ ಬಣ್ಣದ ಹೂಗಳಿಂದಾಗಿ ಗಿಡದ ಚೆಲುವು ಹೆಚ್ಚಿದೆ. ಇದರಲ್ಲಿನ ಟ್ರೈಕಲರ್ ಎಂಬ ಬಗೆಯ ಎಲೆಗಳಿಗೆ ಕಡುಹಸಿರು ಬಣ್ಣವಿದ್ದು ಅವುಗಳ ಅಂಚು ಮಾತ್ರ ಬಿಳಿ ಮತ್ತು ಗುಲಾಬಿ ಬಣ್ಣದ್ದಾಗಿರುವುದರಿಂದ ಗಿಡ ಬಲು ಸೊಗಸಾಗಿ ಕಾಣುತ್ತದೆ. ಕ್ಲೆಯಿರವನ್ನು ಕಾಂಡತುಂಡುಗಳಿಂದ ವೃದ್ಧಿಸಲಾಗುತ್ತದೆ. ವೃದ್ಧಿಗೆ ಆಗಸ್ಟ್-ಸೆಪ್ಟೆಂಬರ್ ತಿಂಗಳು ಸೂಕ್ತಕಾಲ. 	  		(ಬಿ.ಎ.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ